Ads Google

Wednesday, February 24, 2016

Sunrise

ಬಾನಂಚಲಿ ಬಣ್ಣಚೆಲ್ಲಿ
ದಿನಪನೇರಿ ಬೆಳಕ ಹರಡಿ
ಕೆಂಪಾಗಿಹ ನಭದ ಕಡಲ
ಹೊನ್ನ ಕಿರಣದಲೆಯ ನಡುವೆ
ಮೋಡ ನೌಕೆಯಲ್ಲಿ ಭಾನು
ಬಾಳಯಾನ ಸಾಗಿಸಿಹನು

ಬೆಳ್ಳಿಯ ಬೆಳಕನು ಬಾನಲಿ ಪಸರಿಸಿ     
ತಳ್ಳಿದನಾಗಸದಂಚಿಗೆ ನಿಶೆಯನು
ಒಳ್ಳೆಯ ಹರುಷವ ಹರಡಿದ ದಿನಪನು
ಪೊಳ್ಳಿನ ಜೊಳ್ಳಿನ ನಿಜಗಳ ಸಾರಿ

ನಿಶೆಯ ತೋಟದ ತಾರೆ ನಡುವೆ
ಶಶಿಯ ಅಂದವು ಮನವ ಸೆಳೆಯೆ
ಉಷೆಯ ಕಿರಣವ ನಭದಿ ಹರಡುತ
ವಶಕೆ ಪಡೆದನು ಭಾಸ್ಕರ

ಚಂದದ ಬೆಳಗಿನ ಭಾಸ್ಕರನುದಯಿಸಿ 
ಬಂದಿಹ ಬಾಳನು ಬೆಳಗಿ
ಅಂದದ ಹೊನ್ನಿನ ರಶ್ಮಿಯ ಹರಡುತ
ತಂದನು ಬೆಳ್ಳಿಯ ನಗುವ

ಮೂಡಣದಿಂ ಕೆಂಗೋಳವು
ಪಡುವಣದೆಡೆ  ಚೆಂಗನೆಗೆದು
ಬಿಡುವಿಲ್ಲದ ಭಂಟನಂತೆ
ಗುಡುಗುತಿಹುದು ಚಂದ್ರನರಸಿ

Wednesday, February 3, 2016

Poetry

ಹನಿಮಂಜು ಧರೆಗುರುಳಿ ಜಲಧಾರೆಯಾಗದು
ನೊಣ ರೆಕ್ಕೆ ಬಡಿದೊಡನೆ ಬಿರುಗಾಳಿಯೇರದು
ರವಿಯೇರಿ ಬೆಳಕೀವ ಕೋಳಿ ಮಲಗಿದ್ದರೂ
ನೀ ಕುನ್ನಿಯದನರಿಯೊ, ಎಲೆ ಮಾನವ

ಇಷ್ಟವಾದದ್ದು ಇಷ್ಟವಾಗದ್ದು
ಕಷ್ಟವಾದದ್ದು ಕಷ್ಟವಾಗದ್ದು 
ನಷ್ಟವಾದದ್ದು ನಷ್ಟವಾಗದ್ದು 
ಇಷ್ಟೆ ಬಾಳಿಗೆ ಪುಷ್ಟಿ ಎಲೆ ಮಾನವ

ಭಯದಲಿ ಭರದಲಿ ಬರದಿಹ ಬರಹವು
ಬಲವಿರೆ ಬರುವುದು ಬಯಸದೆ ಬಿರುಸಲಿ  
ಬಿಸಿಯಲಿ ಬೆವರುತ ಬೆಸೆಯುತ ಬಸಿಯುತ
ಬೆರಗಲಿ ಬರೆವುದೆ ಬವಣೆಯ ಭಾರ