Ads Google

Wednesday, July 7, 2010

ದೇಶಪಾಂಡೆಯವರೆ, ನೀವು ಬೆಳ್ಳಂಬಿಳುಪಿಗಿಂತಲೂ ಶುಭ್ರ ಎಂದು ಪೋಸು ಕೊಡಬೇಡ್ರಿ!

ಕಾಂಗ್ರೆಸ್ ಪಕ್ಷ "ನೆರೆ ಸಂತ್ರಸ್ತರ ಪರಿಹಾರ ನಿಧಿ"ಯ ದುರುಪಯೋಗ ಮಾಡಿದೆಯೆಂಬ ಸುದ್ದಿ ಓದಿದಾಗ ಮೂಡಿಬಂದ ಅನಿಸಿಕೆಗಳನ್ನು ಬರೆಯಲು ಪ್ರಯತ್ನಿಸಿದ ಫಲ ಈ ಕೆಳಗಿನ ಬರಹ :

ದೇಶಪಾಂಡೆಯವರ (ವಿ.ಕ - ತಾ||07/06/2010) ಬರಹ ಓದಿದಾಗ ನಗಬೇಕೊ ಅಳಬೇಕೊ ತಿಳಿಯಲಿಲ್ಲ. ಅವರ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಅತಿ ಕ್ಲಿಷ್ಟಕರವಾದ ಈ ಸಮಸ್ಯೆಯನ್ನು ತಾವೆ ಮೇಲೆ ಹೇರಿಕೊಂಡದ್ದು ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷದ ಸಂವಿಧಾನದಲ್ಲಿ ಕಾರ್ಯಾಧ್ಯಕ್ಷರ ಹುದ್ದೆಗೆ ಅವಕಾಶವಿಲ್ಲ ಎಂದು ಅವರು ಹೇಳಿಕೆ ನೀಡಿದಾಗಲೇ ಅವರು ಡೀಕೇಶಿಯವರಿಗೆ ಸವಾಲು ಹಾಕಿದಂತಾಯಿತು. ಜೊತೆಗೆ
ಕಾಂಗ್ರೆಸ್ ಹೈಕಮಾಂಡಿಗೂ ಸವಾಲೊಡ್ಡಿದ್ದರು. ಏಕೆಂದರೆ,
ದೇಶಪಾಂಡೆಯವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮತ್ತು ಡೀಕೇಶಿಯವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಮಾಡಿದ್ದು ಕಾಂಗ್ರೆಸ್ ಹೈಕಮಾಂಡ್! ಡೀಕೇಶಿಯವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ತಿರುಗೇಟು ನೀಡುವರೆಂಬುದು ದೇಶಪಾಂಡೆಯವರಿಗೆ ತಿಳಿಯದೆ ಹೋದದ್ದು ವಿಪರ್ಯಾಸ. ಡೀಕೇಶಿ ಸಿಡಿಸಿದ ಬಾಂಬ್ ದೇಶಪಾಂಡೆಯವರನ್ನು ಹತಾಶರನ್ನಾಗಿಸಿ ತತ್ತರಿಸುವಂತೆ ಮಾಡಿದೆ. ಇವರಿಬ್ಬರ ಕಿತ್ತಾಟ, ಕೆಸರೆರೆಚಾಟದಲ್ಲಿ ಕಾಂಗ್ರೆಸ್ ಪಕ್ಷದ ಮರ್ಯಾದೆ (?) ನೀರುಪಾಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬಿರುಕು-ಬಿಕ್ಕಟ್ಟುಗಳು ಬೀದಿಗೆ ಬಂದು ನಿಂತಿವೆ. ಜನರಿಗೆ ಪುಕ್ಕಟ್ಟೆ ಮನರಂಜನೆ ಸಿಕ್ಕಿದೆ. ಜೊತೆಗೆ, ಕಾಂಗ್ರೆಸ್ ಪಕ್ಷ ಸಾರ್ವಜನಿಕರಿಂದ ಸಂಗ್ರಹಿಸಿದ "ನೆರೆ ಸಂತ್ರಸ್ತರ ಪರಿಹಾರ ನಿಧಿ" ಹೇಗೆ ದುರ್ಬಳಕೆಯಾಗಿದೆಯೆಂದು ದೇಣಿಗೆ ನೀಡಿದ ಕೊಡುಗೈದಾನಿಗಳಿಗೆ ಮನವರಿಕೆಯಾಗಿದೆ. ಅಷ್ಟೇ ಅಲ್ಲ, ಇನ್ನು ಮುಂದೆ ಇಂತಹ "ಪರಿಹಾರ ನಿಧಿ ಸಂಗ್ರಹ ಮೆರವಣಿಗೆ"ಗಳನ್ನು ಸಾರ್ವಜನಿಕರು ಸಂಶಯದಿಂದ ನೋಡುವಂತಾಗಿದೆ. ಈ ಹಣ ದುರುಪಯೋಗದ ವಿವರಗಳು ಬೆಳಕು ಕಾಣಲು ದೇಶಪಾಂಡೆ-ಡೀಕೇಶಿಯವರ ಕಲಹವೇ ಕಾರಣವಾಯಿತು. ಇಲ್ಲದಿದ್ದರೆ, ಈ ವಿಷಯ ಸಾರ್ವಜಿಕರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಮುಚ್ಚಿಹೋಗುತ್ತಿತ್ತು!
ದೇಶಪಾಂಡೆಯವರು ತಮ್ಮ ಸ್ಥಾನ ಉಳಿಸಿಕೊಳ್ಳಲು "ಅನ್ಯಬಳಕೆ - ದುರ್ಬಳಕೆ"ಗಳ ವ್ಯಾಖ್ಯಾನದಲ್ಲಿ ಬಿದ್ದು ಹೊರಳಾಡಬಹುದು. ಕಾಂಗ್ರೆಸ್ಸಿಗರ ವಿಮಾನಯಾನಕ್ಕೆ, ದಿನಪತ್ರಿಕೆಗಳಲ್ಲಿ ಜಾಹೀರಾತುಗಳಿಗೆ, ವರದಿ ತಯಾರಿಕೆಗೆ, ಕಚೇರಿ ವೆಚ್ಚಕ್ಕೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಂಚಲು ಟಿ-ಶರ್ಟ್ ಕೊಳ್ಳಲು ಅಥವ ಬಡ್ಡಿಗಳಿಸಲು ಬ್ಯಾಂಕಿನಲ್ಲಿ ಠೇವಣಿ ಇಡಲು, ಜನ ಹಣ ನೀಡಲಿಲ್ಲ. ಕಷ್ಟದಲ್ಲಿದ್ದ ನೆರೆಸಂತ್ರಸ್ತರ ತತ್ ಕ್ಷಣದ ನೆರವಿಗಾಗಿ ಕನ್ನಡಿಗರು ಉದಾರಮನಸ್ಸಿನಿಂದ ವಂತಿಗೆ ನೀಡಿದ್ದರು. ಈ ಸತ್ಕಾರ್ಯಕ್ಕಾಗಿ ಪರಿಹಾರ ನಿಧಿ ವಿನಿಯೋಗವಾಗದಿದ್ದಲ್ಲಿ ಮೂಲ ಸದುದ್ದೇಶ ಸತ್ತುಹೋದಂತೆಯೇ. ಇದು ನಿರ್ವಿವಾದಿತ ಸತ್ಯ. ಕಾಂಗ್ರೆಸ್ ಪಕ್ಷದ ಹೊಲಸು ರಾಜಕಾರಣದಿಂದಲಾದರೂ ಜನರಿಗೆ "ಪರಿಹಾರ ನಿಧಿ ಸಂಗ್ರಹ"ದ ನಾಟಕ ಸದೃಶವಾಗಿ ಮನವರಿಕೆಯಾಗಿದೆ.
ಇಷ್ಟೆಲ್ಲ ತಮ್ಮ ಪಾರದರ್ಶಕತೆ-ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಬರೆದಿರುವ ದೇಶಪಾಂಡೆಯವರು ೧೯೯೬ರ ಮುಂಚಿನ ತಮ್ಮ ಆಸ್ತಿ ವಿವರ ಬಹಿರಂಗಗೊಳಿಸಲು ಹಿಂಜರಿಯುತ್ತಿರುವುದೇಕೆ? ೧೯೯೬ರಿಂದ ೨೦೦೬ರವರೆಗಿನ ಆಸ್ತಿ ವಿವರ ಎಲ್ಲರಿಗೂ ಗೊತ್ತಿದೆ. ಅದೂ ಚುನಾವಣಾ ಆಯೋಗದ ಕೃಪೆಯಿಂದ. ಆದರೆ, ೧೯೯೬ರ ಹಿಂದಿನ ಆಸ್ತಿಯ ವಿವರ ಸಾರ್ವಜನಿಕರಿಗೆ ಗೊತ್ತಾಗದಂತೆ ನ್ಯಾಯಾಲಯದಿಂದ ತೆಡೆಯಾಜ್ಞೆಯನ್ನು ತಂದಿದ್ದಾರೆ. ಇಲ್ಲಿ ದೇಶಪಾಂಡೆಯವರು ಮುಚ್ಚಿಟ್ಟುಕೊಳ್ಳುವಂತಹುದು ಏನಿರಬಹುದು ? ಎರಡು ದಶಕಗಳ ಆಸ್ತಿವಿವರ ಹೋಲಿಸಿದರೆ ತಮ್ಮ (ಆಸ್ತಿಗಳಿಕೆಯ) ನಿಜವಾದ ಬಣ್ಣ ಹೊರಬೀಳುವುದೆಂದೆ?
ಸ್ವತ: ಶ್ರೀಮಂತರಾದ, ಅಪಾರವಾದ ಆಸ್ತಿ-ಸಂಪತ್ತಿನೊಡೆಯರಾದ ದೇಶಪಾಂಡೆ, ಡೀಕೇಶಿ, ರಾಮಲಿಂಗಾರೆಡ್ಡಿ ಮತ್ತಿತರ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಹಣ ನೀಡದೆ ಭಿಕ್ಷಾಪಾತ್ರೆ ಹಿಡಿದು ಜನರ ಮುಂದೆ ಕೈಚಾಚಿದ್ದೇಕೆ? ಪಕ್ಷದ ಖರ್ಚಿಗೆ ಇವರಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ "ಪರಿಹಾರ ನಿಧಿ"ಯೇ ಬೇಕಿತ್ತೆ?
ಈ ನಾಯಕರು ತಮ್ಮ ಹಣ-ಕಾಸಿನ ವ್ಯವಹಾರವನ್ನು ಒಬ್ಬ ಕೆಳದರ್ಜೆಯ ಕಾರಕೂನನಿಗೆ ಕೊಟ್ಟು ಅವನು ಮುಂದಿಟ್ಟ ಎಲ್ಲಾ ಕಾಗದ ಪತ್ರಗಳಿಗೂ ಹಿಂದೆ ಮುಂದೆ ನೋಡದೆ ಸಹಿ ಹಾಕುವರೆ? ಜನರ ಕಿವಿಮೇಲೆ ಹೂವಿಡುವ ಪ್ರಯತ್ನ ಮಾಡಲು ಇವರಿಗೆ ನಾಚಿಕೆಯಾಗುವುದಲ್ಲವೆ?
ದೇಶಪಾಂಡೆಯವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವುದು, ಪ್ರಕರಣವನ್ನು ಮುಚ್ಚಿಹಾಕಲು ಪಡುತ್ತಿರುವ ಪ್ರಯತ್ನ, ನೀಡುತ್ತಿರುವ ಸವಕಲು ಕಾರಣಗಳು ಈ ನಾರುತ್ತಿರುವ "ಪರಿಹಾರ ನಿಧಿ ದುರ್ಬಳಕೆ" ಪ್ರಕರಣದ ಗಬ್ಬುನಾತ ಇನ್ನೂ ಹೆಚ್ಚು ಹರಡುವಂತೆ ಮಾಡಿವೆ.
ದೇಶಪಾಂಡೆಯವರು ಸುಮ್ಮನೆ ತಪ್ಪೊಪ್ಪಿಕೊಂಡು ಮನೆಗೆ ಹೋಗುವುದು ಒಳಿತು. ಇರುವ ಅಲ್ಪ-ಸ್ವಲ್ಪ ಮರ್ಯಾದೆಯಾದರೂ ಉಳಿದೀತು.
- ಅ. ಭಾನು

No comments:

Post a Comment